ಈ ಸಾವು ನ್ಯಾಯವೇ ?

ಕೆಲಸದ ಒತ್ತಡದಿಂದ ಹಾಗು ಮಾನಸಿಕ ತೊಳಲಾಟದಿಂದ ತಿಂಗಳು ಗಟ್ಟಲೆಯಿಂದ ಬ್ಲೋಗ್ ನಿಂದ ದೂರವಾಗಿ ಬಿಟ್ಟಿದ್ದೆ.
ಮೊನ್ನೆ ಇದ್ದಕ್ಕಿದ್ದಂತೆ ನನ್ನ ಬಾಲ್ಯಸ್ನೇಹಿತ ದತ್ತಾತ್ರೇಯನ ಅಕಾಲಿಕ ಮರಣದ ಸುದ್ದಿ ಕೇಳಿದಾಗಿನಿಂದ ಮನಸ್ಸಿನ ಮೂಲೆಯಲ್ಲಿ ಬೇಸರ ಮಡುವುಗಟ್ಟಿ ನಿಂತಿದೆ. ನನ್ನ ಒಂದನೆತರಗತಿಯಿಂದ PUC ಯ ವರೆಗೆ ಯತಾರ್ಥದ ಸಹಪಾಠಿಯಾಗಿದ್ದ ದತ್ತ ಸಾಗರದಿಂದ ರಾತ್ರಿ ಹನ್ನೊಂದು ಗಂಟೆಗೆ ಬರುವಾಗ ಬೋರಿಡುವ ಮಳೆಯಲ್ಲಿ, ಮನೆಸೇರುವ ಒಂದು ಮೈಲಿ ದೂರದಲ್ಲಿ, ಜೀಪಿನ ರೂಪದಲ್ಲಿ ಬಂದ ಜವರಾಯನ ಪಾಶಕ್ಕೆ ಸಿಕ್ಕಿ ಬಿದ್ದಿದ್ದನಂತೆ. ನಾನು, ದತ್ತ ಹಾಗು ಅವಿನಾಶ ನಮ್ಮ ಬಾಲ್ಯಾವಸ್ತೆಯ ಪ್ರತಿಯೊಂದು ಶನಿವಾರ,ಭಾನುವಾರಗಳನ್ನೂ ಗೇರು ಹಕ್ಕಲಲ್ಲಿ ಮರ ಹತ್ತುತ್ತಾ, ನಮ್ಮಅಡಿಕೆ ತೋಟದ ಹೆಗ್ಗಾದಿಗೆಯಲ್ಲಿ ಮೀನು ಹಿಡಿಯುತ್ತಾ ಕಳೆದವರು. ಈಗ್ಗೆ ನಾಲ್ಕು ವರ್ಷದ ಹಿಂದೆ ಮೈಸೂರಿನಲ್ಲಿ ಓದುತಿದ್ದ ಅವಿನಾಶ ರಸ್ತೆ ಅಪಘಾತದಲ್ಲಿಯೇ ತೀರಿ ಕೊಂಡಿದ್ದ.

ಆದರೆ ದತ್ತನ ಸಾವು ಮಾತ್ರ ನನ್ನನ್ನ ಹಲವಾರು ಕಾರಣಗಳಿಂದ ಚಿಂತಾಬ್ಧಿಯಲ್ಲಿ ಮುಳುಗಿಸಿದೆ. ಯಾರಿಗೂ ಒಂದು ದೊಡ್ಡ ಮಾತನಾಡದ, ತಾನಾಯಿತು ತನ್ನ ಕೇಬಲ್ ವ್ಯವಹಾರ ವಾಯಿತು ಎಂದು ಇದ್ದು ತನ್ನ ಹೆಂಡತಿ, ಎರಡು ವರ್ಷದ ಮಗು, ವಯಸ್ಸಾದ ತಂದೆ, ಈಗ ತಾನೆ ಕ್ಯಾನ್ಸರ್ ಆಪರೇಷನ್ ಗೆ ಒಳಗಾದ ತಾಯಿ, ಗಂಡ ಬಿಟ್ಟ ತನ್ನ ಅಕ್ಕ ಮತ್ತು ಅವಳ ಮಕ್ಕಳನ್ನ ಸಾಕುತ್ತಾ ಬದುಕಿದ ಕಷ್ಟಸಹಿಷ್ಣು ಎಲ್ಲರನ್ನ ನಡುನೀರಿನಲ್ಲಿ ಕೈ ಬಿಟ್ಟು ಹೋದದ್ದನ್ನ ಕೇಳಿದಾಗ ನಾನು ದಿನಗಟ್ಟಲೇ ಮೂಕ ರೋದಕ ನಾದೆ.

ತನ್ನ ಎರಡನೆಯ ಪ್ರಸವದ ಸಮಯದಲ್ಲಿ ಹುಟ್ಟಿದ ಮಗುವನ್ನು ಕಳೆದು ಕೊಂಡು ತನ್ನ ಪ್ರಾಣ ಉಳಿಸಿಕೊಳ್ಳಲು ಹೆಣಗಾಡಿದ ಹೆಂಡತಿಯನ್ನ ತನ್ನ ರಕ್ತ ಕೊಟ್ಟು ಸಾವಿನ ದವಡೆ ಯಿಂದ ಹೊರತಂದ ಪುಣ್ಯಾತ್ಮ ಗಂಡನಿಗೆ ಈ ಸಾವು ನ್ಯಾಯವೇ ?
ಕಾಲೇಜಿನ ದಿನಗಳಲ್ಲಿ ಕೂಡಾ ಯಾರ ತಂಟೆಗೆ ಹೋಗದ ಓದಿನ ಕಡೆ ಗಮನವನ್ನ ಕೇಂದ್ರೀಕರಿಸಿ ಒಳ್ಳೆಯ ಫಲಿತಾಂಶ ಪಡೆದ ಸಾತ್ವಿಕ ವಿದ್ಯಾರ್ಥಿಗೆ ಈ ಸಾವು ನ್ಯಾಯವೇ ?
ತಂದೆ ತಾಯಿಯರ ವೃದ್ದಾಪ್ಯದ ಜೀವನವನ್ನ ತಕ್ಕ ಮಟ್ಟಿಗೆ ಸುಖವಾಗಿಡುವ ಸಲುವಾಗಿ ತಾನು ಕರಗಿ ಜಗತ್ತಿಗೆ ಬೆಳಕು ಕೊಡುವ ಮೇಣದಂತೆ ಬದುಕ ಹೊರಟ ಸತ್ಪುತ್ರನಿಗೆ ಈ ಸಾವು ನ್ಯಾಯವೇ ?
ಗಂಡನಿಗೆ ಬೇಡವಾದ ಅಕ್ಕ ಅವಳ ಮಕ್ಕಳ ಜೀವನೋಪಾಯಕ್ಕೆ ಅಂಗಡಿ ಹಾಕಿ ಕೊಟ್ಟು ಅವರ ಗಂಜಿಗೆ ದಾರಿಯಾದ ತಮ್ಮ ನಿಗೆ ಈ ಸಾವು ನ್ಯಾಯವೇ ?

ಯಾರು ಮಾಡಿದ ಯಾವ ತಪ್ಪಿಗಾಗಿ ಈ ಶಿಕ್ಷೆ ? ಅದನ್ನ ಯಾರು ಯಾರು ಅನುಭವಿಸಬೇಕು ? ಎನ್ನುವ ಪ್ರಶ್ನೆಗಳು ನನ್ನಲ್ಲಿ ಬಿಟ್ಟೂ ಬಿಡದೆ ಕಾಡತೊಡಗಿತ್ತು.
ಹಲವಾರು ಮಾರಣಾಂತಿಕ ಅಪಘಾತ ಗಳನ್ನ ಕಣ್ನಾರೆ ನೋಡಿದಾಗ ಕಾಡದ ಸಾವಿನ ಭಯ, ಮಾಡಿದ ಸಣ್ಣ ತಪ್ಪನ್ನು ಮುಚ್ಚಿಡುವ ಸಲುವಾಗಿ ಆತ್ಮಹತ್ಯೆಯಂತ ದೊಡ್ಡ ತಪ್ಪನ್ನ ಮಾಡಿದ ಬಾಲ್ಯದ ಗೆಳೆಯ ಅಖಿಲ್ ನ ಸಾವನ್ನ ನೋಡಿದಾಗ ಕಾಡದ ಸಾವಿನ ಭಯ, ನನ್ನ ಪ್ರೀತಿಯ ಸೂರಜ್ಜ ಕಣ್ಣು ಮುಂದೆ ಕೊನೆಯುಸುರೆಳೆದಾಗ ಕಾಡದ ಸಾವಿನ ಭಯ, ಆಷ್ಟೇ ಏಕೆ ಎರಡೆರಡು ಬಾರಿ ಜವರಾಯನ ಪಾಶದಿಂದ ನೂಲೆಳೆಯಷ್ಟು ಅಂತರ ದಿಂದ ತಪ್ಪಿಸಿ ಕೊಂಡು ಕನಿಷ್ಟ ಭಯದಿಂದ ಮೂರ್ಛೆಯೂ ಹೋಗದೆ ನಗು ನಗುತ್ತಾ ಆಪರೇಷನ್ ಥೇಟರಿಗೆ ನಡೆದು ಕೊಂಡು ಹೋದಾಗ ಕಾಡದ ಸಾವಿನ ಭಯ, ಕೇವಲ ಭಂಡ ದೈರ್ಯದ ಬಲದಿಂದ ರಾತ್ರಿಯ ನಿರ್ಜನ ರಸ್ತೆಯಲ್ಲಿ ಬೈಕ್ ಓಡಿಸುತ್ತಾ ಮನೆಸೇರುವಾಗ ಕಾಡದ ಸಾವಿನ ಭಯ ದತ್ತನ ಬದುಕಿನ ಭೂತ ಹಾಗು ಸಾವಿನ ವರ್ತಮಾನ ಎರಡನ್ನೂ ಕೇಳಿದ ನನಗೆ ಒಂದು ಕ್ಷಣ ಮೈ ಬೆವೆರುವಂತೆ ಮಾಡಿತ್ತು.

ಸುಮಾರು 12 ವರ್ಷಗಳ ನಂತರ ಕಳೆದ ವರ್ಷ ನಾ ಅಣ್ಣನ ಮದುವೆ ಕರೆವುವ ಸಲುವಾಗಿ ಅವನ ಮನೆಗೆ ಹೋದಾಗ ದತ್ತ ಇರಲಿಲ್ಲ.
ನಂತರ ನಾ ಬಂದು ಹೋದ ವಿಷಯ ತಿಳಿದು ನಾನಿದ್ದಲ್ಲಿ ಹುಡುಕಿ ಕೊಂಡು ಬಂದು ಅರ್ದಘಂಟೆ ಹರಟಿದ್ದ. ನೀ ನನ್ನನ್ನ ಹುಡುಕಿ ಕೊಂಡು ನಮ್ಮ ಮನೆಗೆ ಬಂದಾಗ ನಾ ಮನೆಯಲ್ಲಿ ಇರುವುದಿಲ್ಲ ಅದಕ್ಕಾಗಿ ನಾನೇ ನಿನ್ನ ಭೇಟಿ ಮಾಡಿ ಹೋಗಲು ಬಂದೆ ಎಂದಿದ್ದ ಅವನ ಮಾತು ಎರಡೇ ವರ್ಷಗಳಲ್ಲಿ ಎಷ್ಟು ಸತ್ಯ ವಾಗಿ ಹೋಯಿತು ನೋಡಿ.

ಸೊರಬದ ಸುರಭಿ ಹೋಟೆಲ್ ನಲ್ಲಿ ನಾನು, ದತ್ತ ಮತ್ತು ಅವಿ ಹಂಚಿ ತಿಂದ ದೋಸೆಯ ನೆನಪು, ನಮ್ಮ ತೋಟದಲ್ಲಿ ಮೀನು ಹಿಡಿದ ನೆನಪು, ಅಗ್ನೇರ ತಗ್ಗಿನಲ್ಲಿ ಸೈಕಲ್ ಹೊಡೆದ ನೆನಪು, ಸರಿ ರಾತ್ರಿಯ ವರೆಗೆ ದತ್ತನ ಮನೆಯಲ್ಲಿ ಇದ್ದು ಮನೆಗೆ ಬಂದಾಗ ಶಿವುಕಕ್ಕನಿಂದ ಬುದ್ದಿ ಹೇಳಿಸಿ ಕೊಂಡ ನೆನಪು, ದತ್ತನ ಹಾಗು ಕವಿತಾ ಭಾಪಟ್ ಳ ಏಕಮುಖ ಪ್ರೀತಿಗೆ ಕುಮ್ಮಕ್ಕು ಕೊಟ್ಟು ಸಂಭ್ರಮಿಸಿದ ನೆನಪು, ಮನೆಯಲ್ಲಿ ಹೇಳದೆ ಸೊರಬದ ಟೆಂಟ್ ನಲ್ಲಿ ಜುರಾಸಿಕ್ ಪಾರ್ಕ್ ಸಿನಿಮಾ ನೋಡಿದ ನೆನಪು, ಮಾಗಡಿಯ ಆಲೆಮನೆಗೆ ಹೋಗಿ ಆಲೆ ಕಣೆಯವನಿಂದ ಬೈಸಿ ಕೊಂಡು ಅವನಿಗೆ ಶಾಪ ಹಾಕುತ್ತಾ ಬಂದ ನೆನಪು, ಸಂತೋಷ ನ ಅಕ್ಕಿ ಮಿಲ್ಲಿನ ಹಿಂದೆ ಉಮಿಯ ರಾಶಿಯಲ್ಲಿ ಉರುಳಾಡಿದ ನೆನಪು ಹೀಗೆ ಹಲವಾರು ಸಂದರ್ಭ ಗಳಲ್ಲಿ ತಪ್ಪದೇ ನೆನಪಾಗುವ ಬಾಲ್ಯ ಸ್ನೇಹಿತರಿಬ್ಬರೂ ಬಾಳಿ ಬದುಕ ಬೇಕಾದ ಸಮಯದಲ್ಲಿ ಕೇವಲ ನೆನಪಾದ ಘಟನೆ ಮಾತ್ರ ಮರೆಯಲಾಗದ ನೆನಪಾಗಿ ಕಾಡುತ್ತದೆ.

ಜಾತಸ್ಯ ಮರಣಂ ದೃವಂ ಅವರು ಎರಡುದಿನ ಮೊದಲು, ನಾವು ಸ್ವಲ್ಪ ದಿನ ಕಳೆದು ಒಟ್ಟಿನಲ್ಲಿ ಎಲ್ಲರೂ ಒಂದಾಲ್ಲಾ ಒಂದು ದಿನ ನೆನಪಿನಲ್ಲಿ ಸೇರಿಹೋಗಲೇ ಬೇಕು.
ದತ್ತನ ಆತ್ಮಕ್ಕೆ ಪರಮಾತ್ಮ ಶಾಂತಿಯನ್ನ ಕೊಡಲಿ, ಅವನ ಕುಟುಂಬಕ್ಕೆ ಇದನ್ನ ಎದುರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

Comments

Unknown said…
ಅಣ್ಣಾ ನೀನು ಹುಷಾರಾಗಿರು. ಎರಡೂ ವಿಕೆಟ್ ಗಾನ್ ಅಂತಾಯಿತು. ಸ್ವಲ್ಪ ಸಂದ್ಯಾವಂದನೆ ಗಾಯಿತ್ರಿ ಜಪ ಎಲ್ಲಾ ಮಾಡು .ಹ ಹ ಹ
ಆದರೂ ಈಗಾದ ಸಾವು ಅನ್ಯಾಯದ್ದೆ.
ಮೂರ್ತಿ ಸರ್,
ಓದಿ ದುಃಖವಾಯಿತು. ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು, ಕುಟುಂಬದವರಿಗೆ ಆಸರೆಯನ್ನು ಕೊಡಲಿ ಎಂದು ಬೇಡುತ್ತೇನೆ. ಧೈರ್ಯ ತಂದುಕೊಳ್ಳಿ ಸರ್, ಅವರ ಕುಟುಂಬ ತುಂಬಾ ಕಷ್ಟದಲ್ಲೇನಾದರೂ ಇದ್ದರೆ, ನಿಮ್ಮ ಒಂದು ಮಾತಿಗೆ ನಮ್ಮ ಬ್ಲಾಗಿಂಗ್ ಕುಟುಂಬದವರೆಲ್ಲರೂ ಅವರ ಕೈಲಾದ ಸಹಾಯ ಹಸ್ತ ಚಾಚುತ್ತಾರೆ ಎಂದು ನನ್ನ ನಂಬಿಕೆ.
ಧನ್ಯವಾದಗಳು ಗೀತಾ ಮೆಡಮ್.
Ittigecement said…
ಮೂರ್ತಿ....

ನಾನು ಅಂದು ಮಾತಾಡುವಾಗ...
ತುಂಬಾ ತಮಾಷೆ ಮಾಡಿದೆ...
ನೀನು ಇಂಥಹ ಬೇಜಾರದಲ್ಲಿದ್ದೆ ಹೇಳಿ ಗೊತ್ತಾಗಲಿಲ್ಲ....
ಕ್ಷಮಿಸಿಬಿಡು...

ಆದರೆ ಮರೆಯಾದವರ ಸ್ಥಾನ ಶೂನ್ಯವಾಗಿಯೇ ಇರುತ್ತದೆ...
ಯಾವಾಗಲೂ ನೆನಪಾಗಿ ಕಾಡುತ್ತದೆ...
ದುಃಖವಾಗುತ್ತದೆ....

ಕಾಲ ಎಲ್ಲವನ್ನೂ ಮರೆಸುತ್ತದೆ...
ಮರೆವು ಒಂದು ವರವೂ ಹೌದು...

ಗೆಳೆಯ ಅಗಲಿದ ದುಃಖ ಮರೆಯಾಗಲಿ...
ಒಡನಾಡಿದ ಸಿಹಿನೆನಪು ಸದಾ ಹಸಿರಾಗಿರಲಿ....
ಬದುಕು ಎಂದರೆ ಇದೇ...

ಇಂದು
ಬದುಕಿದ ..
ಬದುಕಿನ ಬಗೆಗೆ ..
ನಾಳೆ
ಸಾಯದ ಸಾವಿನ ಬಗೆಗೆ...
ಸಮಚಿತ್ತವಾಗಿರಲಿ ಮನಸು..

(ಕ್ಷಮೆ ಇರಲಿ..)
ಪ್ರಕಾಶಣ್ಣ...
ನಾಣು,
ಓದುತ್ತಿದ್ದರೆ ದುಃಖ ಅರಿದು ಬಂತು. ದೇವರು ಅವರ ಆತ್ಮಕ್ಕೆ ಶಾಂತಿಯನ್ನು ಮತ್ತು ಅವರ ಕುಟುಂಬದವರಿಗೆ ಧೈರ್ಯ ಹಾಗೂ ಆಸರೆಯನ್ನು ಕೊಡಲಿ ಎಂದು ಬೇಡುತ್ತೇನೆ. ಗೆಳೆಯನ ಅಗಲಿಕೆಯ ನೋವು ಮರೆಯಾಗಲಿ, ಸವಿನೆನಪುಗಳು ಹಸಿರಾಗಿ ಉಳಿಯಲಿ
shivu.k said…
ಮೂರ್ತಿ ಸರ್,

ನಿಮ್ಮ ಗೆಳೆಯನ ಸಾವಿನ ವಿಚಾರ ಓದಿ ಮನಸ್ಸಿಗೆ ದುಃಖವಾಯಿತು. ತಮಗಿಷ್ಟವಾದವರು ಅದರಲ್ಲೂ ಬಾಲ್ಯದ ಸ್ನೇಹಿತ ನಮ್ಮ ಜೀವನದುದ್ದಕ್ಕೂ ಗೆಳೆಯನೇ ಆಗಿದ್ದು ಅವನಿಗೆ ಇಂಥ ಸಾವು ಬಂದಾಗ ಖಂಡಿತ ಅದರ ನೋವು ಎಷ್ಟರಮಟ್ಟಿಗಿರುತ್ತದೆ ಅನ್ನುವುದು ಗೊತ್ತಾಗುತ್ತೆ ಸರ್....
ಅವರ ಕುಟುಂಬ ಈ ಸಾವಿನ ನೋವನ್ನು ಬರಿಸುವ ಶಕ್ತಿಯನ್ನು ದೇವರು ಕೊಡಲಿ...
ಧನ್ಯವಾದಗಳು.
Unknown said…
Even I also felt very sad about datta...ur article really made me cry....
Anonymous said…
ಸಾವು ಒಂದು 'ನಿಜ ಸತ್ಯ' ಆದರೂ ಅದನ್ನ ಎದುರಿಸಿದಾಗಲೇ ಅದರ 'ಭಯದ' ಅರಿವಾಗುವುದು!! ನಮ್ಮ ಆತ್ಮೀಯರು ಅದರಲ್ಲೂ ಹೀಗೆ ಒಟ್ಟಿಗೆ ಒಡನಾಡಿದ ಬಾಲ್ಯ ಸ್ನೇಹಿತ ದೂರವಾದರೆ ಆಗುವ ದುಖಃ ವರ್ಣನಾತೀತ. ನಿನ್ನ ದತ್ತ ನ ಆತ್ಮಕ್ಕೆ ಶಾಂತಿ ಹಾಗೂ ನಿನಗೆ ಆ ನಷ್ಟವನ್ನಭರಿಸುವ ಶಕ್ತಿ ಸಿಗಲಿ ಎಂದು ಹಾರೈಸುವೆ! (ಅವನ ತಂದೆ ತಾಯಿಯ ಹಾಗೂ ಹೆಂಡತಿಯ ಸ್ತಿತಿಯನ್ನು ಯೋಚಿಸಲೇ ಆಗುತ್ತಿಲ್ಲ!!)

Popular posts from this blog

ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ ! :)

ಹುಚ್ಚು ಕೋಡಿ ಮನಸು 2

Farmville Application in Facebook